Advertisement

ಉಡುಪಿ ಉಚ್ಚಿಲ ದಸರಾ–2026: ಅ.11ರಿಂದ 21ರವರೆಗೆ ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ ಡಿ.ಕೆ.ಶಿವಕುಮಾರ್

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆಶ್ರಯದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ-2026’ ಅ.11ರಿಂದ 21ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ.

ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಮಾಹಿತಿ ನೀಡಿದರು.

ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ರೋಕ್ತವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ದಸರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಚಂಡಿಕಾಹೋಮ, ಅನ್ನಸಂತರ್ಪಣೆ, ಸಾಮೂಹಿಕ ಕುಂಕುಮಾರ್ಚನೆ, ಭಜನೆ, ಧಾರ್ಮಿಕ ಸಭೆ, ಪ್ರವಚನ ಹಾಗೂ ಕಲೋಕ್ತ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅ.10ರಂದು ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ವಿಶೇಷವಾಗಿ ಮಾಡಲಾಗಿರುವ ವಿದ್ಯುದ್ದೀಪಾಲಂಕಾರವನ್ನು ಅ.10ರಂದು ಸಂಜೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುವುದು. ದಸರಾ ಶೋಭಾಯಾತ್ರೆ ಸಾಗುವ ಮಾರ್ಗದ ಎರಡೂ ಬದಿಗಳಲ್ಲಿರುವ ಮನೆ, ಅಂಗಡಿ ಹಾಗೂ ಮಳಿಗೆಗಳನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ವಿದ್ಯುದ್ದೀಪಗಳು ಹಾಗೂ ತಳಿರು-ತೋರಣಗಳಿಂದ ಅಲಂಕರಿಸಿ ಉತ್ಸವದ ಸಂಭ್ರಮ ಹೆಚ್ಚಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದರು.

ಅ.11ರಂದು ಬೆಳಿಗ್ಗೆ 9ಕ್ಕೆ ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ.

ಅದೇ ದಿನ ಬೆಳಿಗ್ಗೆ 10ಕ್ಕೆ ವಸ್ತು ಪ್ರದರ್ಶನ, ಮಾಹಿತಿ ಶಿಬಿರ, ಮನೋರಂಜನಾ ಕಾರ್ಯಕ್ರಮ ಹಾಗೂ ಜಾತ್ರಾ ಮೈದಾನ ಉದ್ಘಾಟನೆಯಾಗಲಿದೆ. ಮತ್ತ್ವದ್ವಾರ, ದವಸ-ಧಾನ್ಯಗಳಿಂದ ನಿರ್ಮಿಸಲಾದ ಮಹಾಮಾತೆಯರ ಕಲಾಕೃತಿಗಳು, ಜನಜಾಗೃತಿ ಕಲಾಕೃತಿಗಳು, ಕಲ್ಪವೃಕ್ಷ ಉತ್ಪನ್ನಗಳ ಕಲಾಕೃತಿಗಳು, ವಿಶೇಷ ಚೇತನರ ಕಲಾಕೃತಿಗಳು, ಪುಷ್ಪ ಮತ್ತು ಪಕ್ಷಿಗಳ ಪ್ರದರ್ಶನ, ಕೃಷಿಕರ ಪ್ರಾಚೀನ ಮನೆಯ ಮಾದರಿ, ಚರ್ಮವಾದ್ಯ ತಯಾರಿ, ಯಕ್ಷಗಾನ ಕಲಾಕೃತಿ, ಎತ್ತಿನ ಗಾಣ, ಜೀವಂತ ಮೀನುಗಳ ಪ್ರದರ್ಶನ, ಕರಕುಶಲ ಹಾಗೂ ಚನ್ನಪಟ್ಟಣ ಬೊಂಬೆ ತಯಾರಿ ಸೇರಿದಂತೆ ವೈವಿಧ್ಯಮಯ ಪ್ರದರ್ಶನಗಳು ಇರಲಿವೆ ಎಂದು ತಿಳಿಸಿದರು.

ಅ.11ರಂದು ದಸರಾ ಉದ್ಘಾಟನೆ:

ಅ.11ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಉಚ್ಚಿಲ ದಸರಾ-2026ರ ಉದ್ಘಾಟನೆ ನಡೆಯಲಿದ್ದು, ಮುಜರಾಯಿ, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ.ಎಸ್‌. ಬಸವಂತಪ್ಪ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹಾಗೂ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಎಂ. ಲಮಾಣಿ ವಿಶೇಷ ಉಪಸ್ಥಿತರಿರುವರು.

ಅ.12ರಂದು ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರಿಂದ ಮಹಿಳಾ ದಸರಾ ಉದ್ಘಾಟನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಲಾಗುವುದು.

ಸಂಗೀತ, ನೃತ್ಯ, ನಾಟಕಗಳ ವೈವಿಧ್ಯ

ದಸರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಭಜನೆ, ಭಕ್ತಿ ಸಂಗೀತ, ಧಾರ್ಮಿಕ ಪ್ರವಚನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಲೋಕ್ ಬಾಬು ಅವರ ‘ಆಲ್ ಓಕೆ’ ತಂಡದ ಸಂಗೀತ ರಸಮಂಜರಿ, ಕೇರಳದ ಸಿತಾನಿ ಭಜನ್ಸ್ ತಂಡದ ಭಜನ್ ಪ್ಯೂಶನ್, ನಾಟ್ಯಾನಿಲಯಂ ಮಂಜೇಶ್ವರ ತಂಡದ ಜಾನಪದ ಹಾಗೂ ಶಾಸ್ತ್ರೀಯ ನೃತ್ಯ, ಪುತ್ತೂರು ಜಗದೀಶ್ ಆಚಾರ್ಯ ಅವರ ಸಂಗೀತ ಕಾರ್ಯಕ್ರಮ, ಆಳ್ವಾಸ್‌ ಸಾಂಸ್ಕೃತಿಕ ವೈಭವ, ಭರತನಾಟ್ಯ, ಜಾನಪದ ನೃತ್ಯ, ನೃತ್ಯರೂಪಕ, ಸ್ಯಾಕ್ರೋಫೋನ್ ವಾದನ, ಶಾಸ್ತ್ರೀಯ ಸಂಗೀತ ಹಾಗೂ ವೀಣಾವಾದನ ನಡೆಯಲಿದೆ.

ತುಳು ಹಾಸ್ಯ ನಾಟಕ ‘ರಾಘು ಮಾಸ್ಟು’ ಹಾಗೂ ‘ಮಹಿಮೆದ ಅಪ್ಪೆ ಭಗವತಿ’ ಸೇರಿದಂತೆ ನಾಟಕ ಪ್ರದರ್ಶನಗಳೂ ಉತ್ಸವಕ್ಕೆ ಮೆರುಗು ನೀಡಲಿವೆ.

ವಿವಿಧ ಸ್ಪರ್ಧೆಗಳು

ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯೋತ್ಸವ ಹಾಗೂ ನೃತ್ಯ ಸ್ಪರ್ಧೆ, ಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರು ಹಾಗೂ ಪುರುಷರ ಹುಲಿಕುಣಿತ, ಮಕ್ಕಳ ಕಿನ್ನಿ ಪಿಲಿ ನಲಿಕೆ, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯೂ ಆಯೋಜಿಸಲಾಗಿದೆ. ಸಾಮೂಹಿಕ ಕುಣಿತ ಭಜನೆ, ದಾಂಡಿಯಾ ನೃತ್ಯ ಹಾಗೂ ದಸರಾ ಕವಿಗೋಷ್ಠಿಯೂ ನಡೆಯಲಿದೆ.

11 ದಿನವೂ ಅನ್ನಸಂತರ್ಪಣೆ

ಪ್ರತಿದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಚಂಡಿಕಾಹೋಮ, ಮಧ್ಯಾಹ್ನ 12ರಿಂದ 3ರವರೆಗೆ ಅನ್ನಸಂತರ್ಪಣೆ, ಸಂಜೆ 5.30ರಿಂದ 6.15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಂಜೆ 6.30ರಿಂದ ಪ್ರಸಾದ ವಿತರಣೆ ಹಾಗೂ ರಾತ್ರಿ 8.30ರಿಂದ ಕಲೋಕ್ತ ಪೂಜೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ಭಜನೆ ಮತ್ತು ಸಂಜೆ ಧಾರ್ಮಿಕ ಸಭೆಯೂ ಇರಲಿದೆ.

ದಸರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಸುಗಮ ದರ್ಶನ ಹಾಗೂ ಅನ್ನಸಂತರ್ಪಣೆಯನ್ನು ವ್ಯವಸ್ಥಿತವಾಗಿ ನಡೆಸಲು ಪ್ರತಿದಿನ ಸುಮಾರು 1,500 ಸ್ವಯಂಸೇವಕರು ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ಮಹಿಳಾ ತಂಡಗಳು ಹಾಗೂ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ.

ಅ.21ರಂದು ಭವ್ಯ ಶೋಭಾಯಾತ್ರೆ:

ಉಡುಪಿ ಉಚ್ಚಿಲ ದಸರಾದ ಪ್ರಮುಖ ಆಕರ್ಷಣೆಯಾಗಿರುವ ಭವ್ಯ ಶೋಭಾಯಾತ್ರೆ ಅ.21ರಂದು ಮಧ್ಯಾಹ್ನ 3ಕ್ಕೆ ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡಲಿದೆ. ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ.

ಶ್ರೀ ಕ್ಷೇತ್ರ ಉಚ್ಚಿಲದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹೆರುಮಾಲ ಹುಚ್ಚಿನ ಮೂಲಕವಾಗಿ ಕಾಪುಬೀಚ್‌ನ ದೀಪಸ್ತಂಭದವರೆಗೆ ಶೋಭಾಯಾತ್ರೆ ಸಾಗಲಿದೆ. ಕಾಪು ಸಮುದ್ರತೀರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೋಟುಗಳ ಮೂಲಕ ಸಮುದ್ರ ಮಧ್ಯೆ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಪಂಡಿತರಿಂದ ನವದುರ್ಗೆಯರು, ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ವಿಶೇಷ ಗಂಗಾರತಿ ಮತ್ತು ಡೋನ್ ಮೂಲಕ ಪುಷ್ಪಾರ್ಚನೆ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಗಳಾಗಿವೆ.

ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ

ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸರಸ್ವತಿ ಶಾಲೆಯ ಮೈದಾನ ಹಾಗೂ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ

0 Votes: 0 Upvotes, 0 Downvotes (0 Points)

Advertisement

Leave a reply

Advertisements
Join Us
  • Facebook38.5K
  • X Network32.1K
  • Instagram18.9K

Stay Informed With the Latest & Most Important News

I consent to receive newsletter via email. For further information, please review our Privacy Policy

Categories

Advertisement

Loading Next Post...
Follow
Search Trending
Popular Now
Loading

Signing-in 3 seconds...

Signing-up 3 seconds...

Cart
Cart updating

ShopYour cart is currently is empty. You could visit our shop and start shopping.